ಬುಧವಾರ, ಅಕ್ಟೋಬರ್ 28, 2015

ಮೂಢ ಉವಾಚ - 96

ಕೋಪವೆಂಬುದು ಕೇಳು ವಂಶದಾ ಬಳುವಳಿಯು
ಸುಜನ ಸಹವಾಸವೇ ಪರಿಹಾರದಮೃತವು |
ಕೋಪದ ತಾಪದಿಂ ಪಡದಿರಲು ಪರಿತಾಪ
ಶಾಂತಚಿತ್ತದಲಿ ಅಡಿಯನಿಡು ಮೂಢ ||


ಮಂಗಳವಾರ, ಅಕ್ಟೋಬರ್ 27, 2015

ಮೂಢ ಉವಾಚ - 95

ಸರಸ ಸಂತಸವಿಲ್ಲ ಮನಕೆ ನೆಮ್ಮದಿಯಿಲ್ಲ
ಮಾತಿಲ್ಲ ಕತೆಯಿಲ್ಲ ನಗುವು ಮೊದಲೇ ಇಲ್ಲ|
ಕೋಪಿಷ್ಠರ ಮನೆಯು ಸೂತಕದ ಅಂಗಣವು
ಕೋಪವದು ನರಕದ್ವಾರವೋ ಮೂಢ||


ಶನಿವಾರ, ಅಕ್ಟೋಬರ್ 24, 2015

ಮೂಢ ಉವಾಚ - 94

ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ
ಕೋಪದಿಂದಲೆ ನಾಶ ಕೋಪದಿಂದಲೆ ಭಯವು |
ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ
ಕೋಪಿಷ್ಠರವರು ಪಾಪಿಷ್ಠರೋ ಮೂಢ ||


ಮಂಗಳವಾರ, ಅಕ್ಟೋಬರ್ 20, 2015

ಮೂಢ ಉವಾಚ - 93

ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ |
ತಡೆಯಬಂದವರನೆ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ ||


ಸೋಮವಾರ, ಅಕ್ಟೋಬರ್ 19, 2015

ಮೂಢ ಉವಾಚ - 92

ಕೆಂಡ ಕಾರುವ ಕಣ್ಣು ಗಂಟಿಕ್ಕಿದ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು |
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||

ಭಾನುವಾರ, ಅಕ್ಟೋಬರ್ 18, 2015

ಮೂಢ ಉವಾಚ - 91

ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು|
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ
ದಿವ್ಯ ಕಾಮ ರಮ್ಯ ಕಾಮ ನಿನದಲ್ತೆ ಮೂಢ||


ಶುಕ್ರವಾರ, ಅಕ್ಟೋಬರ್ 16, 2015

ಮೂಢ ಉವಾಚ - 90

ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು
ಕಾಮವೆಂಬುದು ಪಾಶ ಕಾಮದಿಂದಲೆ ನಾಶ |
ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ
ಕಾಮದಿಂದಲೆ ಸಕಲ ಸಂಪದವು ಮೂಢ || 

ಗುರುವಾರ, ಅಕ್ಟೋಬರ್ 15, 2015

ಮೂಢ ಉವಾಚ - 89

ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ
ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ |
ಬಯಕೆ ಜೀವನವು ಬಯಸುವುದು ತಪ್ಪಲ್ಲ
ಸ್ವಬಲವೇ ಹಂಬಲಕೆ ಬೆಂಬಲವು ಮೂಢ ||


ಮೂಢ ಉವಾಚ - 88

ಹಿತಕಾಮ ಮಿತಕಾಮ ವಿಕಟಕಟ ಕಾಮ
ಸತ್ಕಾಮ ದುಷ್ಕಾಮ ಸುರಾಸುರರ ಕಾಮ |
ಎಂತಪ್ಪ ಜನರಿಹರೋ ಅಂತಪ್ಪ ಕಾಮ
ನಿಷ್ಕಾಮ ಕಾಮ್ಯತೆಯೆ ಗುರಿಯಿರಲಿ ಮೂಢ ||


ಬುಧವಾರ, ಅಕ್ಟೋಬರ್ 14, 2015

ಮೂಢ ಉವಾಚ - 87

ತನು ಮನಗಳ ತೀರದ ದಾಹವದೆ ಕಾಮ
ದಾಹವನು ತಣಿಸಲು ಮಾಡುವುದೆ ಕರ್ಮ|
ತಣಿಯದದು ದಾಹ ನಿಲ್ಲದದು ಕರ್ಮ
ದೇವನಾಟವನರಿತವರಾರೋ ಮೂಢ||


ಭಾನುವಾರ, ಅಕ್ಟೋಬರ್ 11, 2015

ಮೂಢ ಉವಾಚ - 86

ಹೊನ್ನು ಕಾರಣವಲ್ಲ, ಹೆಣ್ಣು ಕಾರಣವಲ್ಲ
ಮಣ್ಣು ಕಾರಣವಲ್ಲ, ಮನಸು ಕಾರಣವಲ್ಲ |
ಬೇಕು ಬೇಕು ಬೇಕೆಂಬ ಅನಂತಾತೃಪ್ತತೆಗೆ
ಕಾಮ ಕಾರಣವಲ್ಲದೆ ಮತ್ತೊಂದಲ್ಲ ಮೂಢ ||


ಶನಿವಾರ, ಅಕ್ಟೋಬರ್ 10, 2015

ಮೂಢ ಉವಾಚ - 85

ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು |
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ ||


ಮೂಢ ಉವಾಚ - 84

ಆತ್ಮನೇ ತಾನೆಂಬ ಅರಿವು ಮರೆಯಾಗಿ
ತನು-ಮನವೇ ತಾವೆಂದು ಭ್ರಮಿತರಾಗಿರಲು|
ತುಂಬಿದಜ್ಞಾನದಿಂ ಜನಿಸುವುದು ಕಾಮ
ಕಾಮಫಲಿತಕಾಗಿ ಕರ್ಮಗೈವರು ಮೂಢ|| 


ಶುಕ್ರವಾರ, ಅಕ್ಟೋಬರ್ 9, 2015

ಮೂಢ ಉವಾಚ - 83

ಆರು ಅರಿಗಳನು ಅರಿಯದವರಾರಿಹರು?
ದೇವಕಾಮದ ಫಲವಲ್ಲವೇ ಚರಾಚರರು? |
ನಿತ್ಯಮುಕ್ತ ಪರಮಾತ್ಮನಾಧೀನ ಕಾಮವಾದರೆ
ಕಾಮನಾಧೀನರಾಗಿಹರು ನರರು ಮೂಢ ||

ಬುಧವಾರ, ಅಕ್ಟೋಬರ್ 7, 2015

ಮೂಢ ಉವಾಚ - 82

ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲ
ಮದಕೆ ಮೆದುಳಿಲ್ಲ ಮೋಹದ ಕಿವಿ ಮಂದ |
ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟ
ಅಂಗವಿಕಲನಾಗದಿರೆಲೋ ಮೂಢ ||


ಸೋಮವಾರ, ಅಕ್ಟೋಬರ್ 5, 2015

ಮೂಢ ಉವಾಚ - 81

ಪರಮಾತ್ಮನೆಂಬುವನು ಎಲ್ಲಿಹನು ಕೇಳಿ
ದೇವಭಕ್ತರೆ ಹೇಳಿ ಅರಿತವರೆ ತಿಳಿ ಹೇಳಿ |
ದೇವನಿರದಿಹನೆ ಜೀವಿಗಳ ಉದರದಲಿ
ದೇವನೆಲ್ಲಿ ಹಸಿವಿಲ್ಲದಿರೆ ಮೂಢ ||


ಭಾನುವಾರ, ಅಕ್ಟೋಬರ್ 4, 2015

ಮೂಢ ಉವಾಚ - 80

ಹಸಿವ ತಣಿಸಲು ಹೆಣಗುವರು ನರರು
ಏನೆಲ್ಲ ಮಾಡುವರು  ಜೀವ ಸವೆಸುವರು |
ಆ ಪರಿಯ ಕಳಕಳಿ ಕಲಿಕೆಯಲಿ ಬರಲಿ
ಒಳಿತು ಬಯಸುವುದರಲಿರಲಿ ಮೂಢ ||


ಶುಕ್ರವಾರ, ಅಕ್ಟೋಬರ್ 2, 2015

ಮೂಢ ಉವಾಚ - 79

ಹಸಿವಿನಿಂ ಬಳಲುತಿರೆ ಹೊನ್ನು ಬೇಕೇನು?
ಹಸಿವಿನಿಂ ನರಳುತಿರೆ ಹೆಣ್ಣು ಬೇಕೇನು?|
ಹಸಿವು ಹಿಂಗಿಸಲು ಅನ್ನವೇ ಬೇಕು
ಹೊಟ್ಟೆ ತುಂಬಿರಲೆಲ್ಲವೂ ಬೇಕು ಮೂಢ ||

ಮೂಢ ಉವಾಚ - 78

ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?
ಹಸಿವು ಮಾಡಿಸುವ ಕುಕರ್ಮಗಳೆನಿತೊಂದು |
ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು
ಆತ್ಮಾಭಿಮಾನ ಮರೆಸುವುದೋ ಮೂಢ ||


ಗುರುವಾರ, ಅಕ್ಟೋಬರ್ 1, 2015

ಮೂಢ ಉವಾಚ - 77

ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡವೇ ಬೇಡ |
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ ||